ಗುರುವಾರ, ಮೇ 29, 2025

ಅಮೇರಿಕದಲ್ಲಿ ನವಜಾತ ಶಿಶು ಔಷಧ ಶಾಸ್ತ್ರದಲ್ಲಿ ಮಲೆನಾಡಿನ ಕನ್ನಡಿಗನ ಸಾಧನೆ

ಡಾ. ಎಂ. ಶಿವಕುಮಾರ್ ಸಾಧನೆ ಯುವ ಸಮುದಾಯಕ್ಕೆ ಸ್ಪೂರ್ತಿದಾಯಕ


ಅಮೇರಿಕದಲ್ಲಿರುವ ಮೂಲತಃ ಶಿವಮೊಗ್ಗ ಸಿದ್ದಯ್ಯ ರಸ್ತೆ, ಗಾಂಧಿಬಜಾರ್ ನಿವಾಸಿ, ನವಜಾತ ಶಿಶು ಔಷಧ ಶಾಸ್ತ್ರ 
ವಿಜ್ಞಾನಿ ಡಾ. ಎಂ. ಶಿವಕುಮಾರ್

* ಅನಂತಕುಮಾರ್ 

    ಭದ್ರಾವತಿ : ಮಲೆನಾಡಿನ ಕನ್ನಡಿಗರ ಸಾಧನೆ ವಿದೇಶದಲ್ಲೂ ಮುಂದುವರೆಯುತ್ತಿದ್ದು, ವೈದ್ಯಕೀಯ ಔಷಧ ಶಾಸ್ತçದಲ್ಲಿ ಹಲವು ಸಾಧನೆಗಳನ್ನು ಮಾಡುವ ಮೂಲಕ ಪ್ರಸ್ತುತ ಅಮೇರಿಕದಲ್ಲಿ ವಿಜ್ಞಾನಿಯಾಗಿರುವ ಡಾ. ಎಂ. ಶಿವಕುಮಾರ್‌ರವರ ಸಾಧನೆ ಇಲ್ಲಿನ ಯುವ ಸಮುದಾಯಕ್ಕೆ ಸ್ಪೂರ್ತಿದಾಯಕವಾಗಿದೆ. 

    ಮೂಲತಃ ಶಿವಮೊಗ್ಗ ಸಿದ್ದಯ್ಯ ರಸ್ತೆ, ಗಾಂಧಿಬಜಾರ್ ನಿವಾಸಿಯಾಗಿರುವ ಶಿವಕುಮಾರ್‌ರವರು ನ್ಯಾಯವಾದಿ ಮಹಾದೇವ ಲಾಲ್‌ರವರ ಪುತ್ರರಾಗಿದ್ದಾರೆ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್ಸಿ (BSc)  ಪದವಿ ಪಡೆದ ನಂತರ ಮಣಿಪಾಲ್ ಕಸ್ತೂರ್ಬಾ ಮೆಡಿಕಲ್ ಕಾಲೇಜ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಂಡು 2011ರಲ್ಲಿ ವೈದ್ಯಕೀಯ ಔಷಧ ಶಾಸ್ತ್ರ (Pharmacology)  ದಲ್ಲಿ ಮಣಿಪಾಲ್ ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ ಶಿವಕುಮಾರ್‌ರವರು ವೈದ್ಯಕೀಯ ಹಾಗೂ ದಂತ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ಕ್ಲಿನಿಕಲ್ ಔಷಧ ಶಾಸ್ತç (pharmacology)  ವಿಷಯದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಮಂಗಳೂರಿನ ಮುಕ್ಕಾದ ಶ್ರೀನಿವಾಸ್ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವಾಗ ಇವರಿಗೆ ಹತ್ತಿರದವರಿಂದ ವೈದ್ಯಕೀಯ ಮಾಹಿತಿ ಪಡೆಯಲು ಕರೆ ಬಂದಿದ್ದು, ಅವರ ನವಜಾತ ಶಿಶುವಿಗೆ ಮೆದುಳು ಮತ್ತು ರಕ್ತದ ಸೋಂಕು ಸಂಬಂಧಿತ ಸಮಸ್ಯೆಗಳಿದ್ದವು. ದುರಾದೃಷ್ಟವಶಾತ್ ಆ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಇವರಿಗೆ ಔಷಧ ಪ್ರಮಾಣ (medicine dosage), ಮುನ್ಸೂಚನೆ ಮತ್ತು ತಿದ್ದುಪಡಿಯಲ್ಲಿ ವ್ಯಾಪಕ ಸಂಶೋಧನೆಯ ಮೂಲಕ ನವಜಾತ ಶಿಶು ಔಷಧ ಶಾಸ್ತ್ರ ಕ್ಷೇತ್ರದಲ್ಲಿ ಕೊಡುಗೆ ನೀಡಲು ಆಸಕ್ತಿಯನ್ನು ಹುಟ್ಟು ಹಾಕಿತು. ಇವರ ಆಸಕ್ತಿಗೆ ತಕ್ಕಂತೆ ಇದೆ ವಿಷಯದಲ್ಲೇ ಸಂಶೋಧನೆ(ಪಿಎಚ್‌ಡಿ) ಮಾಡಲು ಅವಕಾಶ ಲಭಿಸಿತು. ಡಾ. ಲೆಸ್ಲಿ ಲೂಯಿಸ್ (Leslie Lewis), ನವಜಾತ ಶಿಶುವಿನ ತಜ್ಞರು, ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಂಡಿಸಿ 2019ರಲ್ಲಿ ನವಜಾತ ಶಿಶು ಔಷಧ ಶಾಸ್ತ್ರ (Neonatal pharmacology - Pharmacometric) ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದುಕೊಂಡರು. 


    ಶಿವಕುಮಾರ್‌ರವರು 2015ರಲ್ಲಿ ಪಾಪುಲೇಷನ್ ಅಪ್ರೋಚ್ ಗ್ರೂಪ್ ಆಫ್ ಇಂಡಿಯಾ (PAGIN) ವತಿಯಿಂದ ಸಂಶೋಧನೆ ಮತ್ತು ವೈದ್ಯಕೀಯ ಔಷಧ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಗಳನ್ನು ಆಧರಿಸಿ ಅತ್ಯುನ್ನತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ 2017ರಲ್ಲಿ ಸ್ವೀಡನ್ ಉಪ್ಪಸಲ ವಿಶ್ವವಿದ್ಯಾಲಯ (Sweden Uppsala University) ಔಷಧ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಅಂತರಾಷ್ಟ್ರೀಯ ನೋವಾರ್ಟಿಸ್ (Novartis) ಪ್ರಶಸ್ತಿಯನ್ನು ಸಹ ಶಿವಕುಮಾರ್ ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಯು ಅಂತರಾಷ್ಟ್ರೀಯ ಔಷಧಶಾಸ್ತ್ರ ಸಮುದಾಯದ ಅತಿ ಉನ್ನತ ಪ್ರಶಸ್ತಿಯಲ್ಲಿ ಒಂದೆಂದು ಪರಿಗಣಿಸಲಾಗಿದೆ. 2018ರಲ್ಲಿ ಸೈನ್ಸ್ ಅಂಡ್ ಇಂಜಿನಿಯರಿಂಗ್ ರಿಸರ್ಚ್ ಬೋರ್ಡ್ (SERB) ವತಿಯಿಂದ ಇವರ ಸಂಶೋಧನೆಗಾಗಿ ಸರಿಸುಮಾರು 16,41,000 ರು. ಅನುದಾನ ಲಭಿಸಿರುತ್ತದೆ. 2019ರಲ್ಲಿ ಸ್ವಿಟ್ಜರ್‌ಲ್ಯಾಂಡ್ (Switzerland) ನಲ್ಲಿ ನಡೆದ ಯೂರೋಪಿಯನ್ ಸೊಸೈಟಿ ಆಫ್ ಡೆವಲಪ್‌ಮೆಂಟಲ್ ಪೆರಿನಾಟಲ್ ಅಂಡ್ ಪೆಡಿಯಾಟ್ರಿಕ್ ಫಾರ್ಮಾಕೊಲಜಿ (ESDPPP) ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಶಿವಕುಮಾರ್‌ರವರು ತಮ್ಮ ಸಂಶೋಧನಾ ವರದಿ ಮಂಡಿಸಲು ಆಯ್ಕೆಯಾಗಿದ್ದರು. ಸಮ್ಮೇಳನ ನೋಂದಾಣಿ ಹಾಗು ಪ್ರಯಾಣ ವೆಚ್ಚವನ್ನು ಬಹುಮಾನದ ರೂಪದಲ್ಲಿ ಪಡೆದುಕೊಂಡಿದ್ದರು. 

 2021 ರಲ್ಲಿ ಎಲ್ಸೆವಿಯರ್ ಪ್ರಕಾಶನ ಪ್ರಕಟಿಸಿದ ʻನ್ಯಾನೋ-ಫಾರ್ಮಾಕೊಕಿಟಿಕ್ಸ್ ಅಂಡ್ ಥೆರನೊಸ್ಟಿಕ್ಸ್ : ಅಡ್ವಾನ್ಸಿಂಗ್ ಕ್ಯಾನ್ಸರ್ ಥೆರಾಪಿʼ ಎಂಬ ಪುಸ್ತಕದಲ್ಲಿ ನ್ಯಾನೋ-ಫಾರ್ಮಾಕೊಕಿಟಿಕ್ ಕುರಿತು ಒಂದು ಅಧ್ಯಯನ ಸಹ ಶಿವಕುಮಾರ್ ಬರೆದಿದ್ದಾರೆ. ಇದುವರೆಗೂ 12ಕ್ಕೂ ಹೆಚ್ಚು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಮರ್ಶನ ವೈಜ್ಞಾನಿಕ ಲೇಖನ ಗಳನ್ನು ಬರೆದಿದ್ದಾರೆ. ಅಲ್ಲದೆ 8ಕ್ಕೂ ಹೆಚ್ಚು ಹಸ್ತಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದಾರೆ. ಈ ನಡುವೆ ಶಿವಕುಮಾರ್‌ರವರಿಗೆ ಮುಂಬರುವ ಯೂರೋಪಿಯನ್ ಸೊಸೈಟಿ ಆಫ್ ಮೆಡಿಸಿನ್ ನವಜಾತ ಶಿಶು ಔಷಧ ಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ಕುರಿತಾಗಿ ಹಸ್ತ ಪತ್ರಿಕೆಗಳ ಬೇಡಿಕೆ ಬಂದಿವೆ. 

2019ರಲ್ಲಿ ಅಮೇರಿಕಾದ ಟೆನ್ನಿಸ್ಸಿಯಲ್ಲಿರುವ ಯೂನಿಯನ್ ಯುನಿವರ್ಸಿಟಿ ಪೋಸ್ಟ್ ಆಫ್ ರೇಟ್ ಸಂಶೋಧಕರಾಗಿ ಶಿವಕುಮಾರ್ ಆಯ್ಕೆಯಾಗಿದ್ದರು. ಇದರ ನಂತರ ಎರಡು ವರ್ಷಗಳ ಕಾಲ ಅಮೇರಿಕದ ಒಂದು ಸಿಆರ್‌ಓನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ವೈದ್ಯಕೀಯ ಔಷಧ ಶಾಸ್ತ್ರ ವಿಜ್ಞಾನಿಯಾಗಿ ಅಮೇರಿಕದ ಔಷಧ ಉತ್ಪಾದನಾ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಾಗಿ ಹಂಬಲಿಸುತ್ತಿರುವ ಶಿವಕುಮಾರ್‌ರವರಿಗೆ ಮಾತೃದೇಶದ ಜನರ ಪ್ರೀತಿ, ಸಹಕಾರ ಹಾಗು ಆಶೀರ್ವಾದ ಅಗತ್ಯವಿದೆ. 

 



ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆ : ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ

  ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಸಸ...