ಬುಧವಾರ, ಜೂನ್ 18, 2025

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆ : ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ

 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸಲಾಗುತ್ತಿದೆ. 

    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 4000 ಸಸಿಗಳನ್ನು ವಿತರಿಸಲಾಗಿದೆ. 

    ಕಾರ್ಖಾನೆ ವತಿಯಿಂದ ಸಾಮಾಜಿಕ ಕಾರ್ಯ ಯೋಜನೆಯಡಿ ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಡಲು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದ್ದು, ಕಾರ್ಖಾನೆ ಭದ್ರತಾ ಸಿಬ್ಬಂದಿಗಳು ತಮ್ಮ ಬಿಡುವಿನ ಅವಧಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಕರಿಬೇವು, ಹಲಸು, ಪಪ್ಪಾಯಿ, ನುಗ್ಗೆ ಸೇರಿದಂತೆ ಹಲವು ರೀತಿಯ ಸಸಿಗಳನ್ನು ಬೆಳೆಸುವ ಮೂಲಕ ಸಾರ್ವಜನಿಕರಿಗೆ ಪರಿಸರ ಕುರಿತು ಜಾಗೃತಿ ಮೂಡಿಸಿ ಸಸಿಗಳನ್ನು ನೆಡುವ ಮೂಲಕ ಪೋಷಿಸಿ ಬೆಳೆಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. 

     2024ರ ಸಾಲಿನಲ್ಲಿ ಒಟ್ಟು ಸುಮಾರು 2000 ಸಸಿಗಳನ್ನು ಕಾರ್ಖಾನೆ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಹಾಗು ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜುಗಳಿಗೆ ಉಚಿತವಾಗಿ ವಿತರಿಸಲಾಗಿದೆ. 

 ಈ ಬಾರಿ ಪ್ರಸಕ್ತ ಸಾಲಿನಲ್ಲಿ ಕೇವಲ 6 ತಿಂಗಳ ಅವಧಿಯಲ್ಲಿ ಸುಮಾರು 4000 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಈ ಪೈಕಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸುಮಾರು 750ಕ್ಕೂ ಅಧಿಕ ಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ. 

 ಬುಧವಾರ ಬೆಳಿಗ್ಗೆ ಕಾರ್ಖಾನೆ ಮುಖ್ಯದ್ವಾರದಲ್ಲಿ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸುವ ಮೂಲಕ ಪೋಷಿಸಿ ಬೆಳೆಸುವಂತೆ ಮನವಿ ಮಾಡಿದರು. 

     ಪ್ರಸಕ್ತ ಸಾಲಿನಲ್ಲಿ ಗುರಿ ಮೀರಿ ಸಸಿಗಳನ್ನು ವಿತರಣೆ ಮಾಡಲಾಗಿದ್ದು, ಆದರೂ ಸಹ ಸಸಿ ವಿತರಣೆ ಮುಂದುವರೆಯಲಿದೆ. ಸಭೆ, ಸಮಾರಂಭ, ರಾಷ್ಟ್ರೀಯ ಹಬ್ಬಗಳ ಆಚರಣೆ ಸೇರಿದಂತೆ ಇನ್ನಿತರ ವಿಶೇಷ ದಿನಗಳಂದು ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. 

ಗುರುವಾರ, ಮೇ 29, 2025

ಅಮೇರಿಕದಲ್ಲಿ ನವಜಾತ ಶಿಶು ಔಷಧ ಶಾಸ್ತ್ರದಲ್ಲಿ ಮಲೆನಾಡಿನ ಕನ್ನಡಿಗನ ಸಾಧನೆ

ಡಾ. ಎಂ. ಶಿವಕುಮಾರ್ ಸಾಧನೆ ಯುವ ಸಮುದಾಯಕ್ಕೆ ಸ್ಪೂರ್ತಿದಾಯಕ


ಅಮೇರಿಕದಲ್ಲಿರುವ ಮೂಲತಃ ಶಿವಮೊಗ್ಗ ಸಿದ್ದಯ್ಯ ರಸ್ತೆ, ಗಾಂಧಿಬಜಾರ್ ನಿವಾಸಿ, ನವಜಾತ ಶಿಶು ಔಷಧ ಶಾಸ್ತ್ರ 
ವಿಜ್ಞಾನಿ ಡಾ. ಎಂ. ಶಿವಕುಮಾರ್

* ಅನಂತಕುಮಾರ್ 

    ಭದ್ರಾವತಿ : ಮಲೆನಾಡಿನ ಕನ್ನಡಿಗರ ಸಾಧನೆ ವಿದೇಶದಲ್ಲೂ ಮುಂದುವರೆಯುತ್ತಿದ್ದು, ವೈದ್ಯಕೀಯ ಔಷಧ ಶಾಸ್ತçದಲ್ಲಿ ಹಲವು ಸಾಧನೆಗಳನ್ನು ಮಾಡುವ ಮೂಲಕ ಪ್ರಸ್ತುತ ಅಮೇರಿಕದಲ್ಲಿ ವಿಜ್ಞಾನಿಯಾಗಿರುವ ಡಾ. ಎಂ. ಶಿವಕುಮಾರ್‌ರವರ ಸಾಧನೆ ಇಲ್ಲಿನ ಯುವ ಸಮುದಾಯಕ್ಕೆ ಸ್ಪೂರ್ತಿದಾಯಕವಾಗಿದೆ. 

    ಮೂಲತಃ ಶಿವಮೊಗ್ಗ ಸಿದ್ದಯ್ಯ ರಸ್ತೆ, ಗಾಂಧಿಬಜಾರ್ ನಿವಾಸಿಯಾಗಿರುವ ಶಿವಕುಮಾರ್‌ರವರು ನ್ಯಾಯವಾದಿ ಮಹಾದೇವ ಲಾಲ್‌ರವರ ಪುತ್ರರಾಗಿದ್ದಾರೆ. ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್ಸಿ (BSc)  ಪದವಿ ಪಡೆದ ನಂತರ ಮಣಿಪಾಲ್ ಕಸ್ತೂರ್ಬಾ ಮೆಡಿಕಲ್ ಕಾಲೇಜ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಕೈಗೊಂಡು 2011ರಲ್ಲಿ ವೈದ್ಯಕೀಯ ಔಷಧ ಶಾಸ್ತ್ರ (Pharmacology)  ದಲ್ಲಿ ಮಣಿಪಾಲ್ ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. ನಂತರ ಶಿವಕುಮಾರ್‌ರವರು ವೈದ್ಯಕೀಯ ಹಾಗೂ ದಂತ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ಕ್ಲಿನಿಕಲ್ ಔಷಧ ಶಾಸ್ತç (pharmacology)  ವಿಷಯದ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದರು. ಮಂಗಳೂರಿನ ಮುಕ್ಕಾದ ಶ್ರೀನಿವಾಸ್ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿರುವಾಗ ಇವರಿಗೆ ಹತ್ತಿರದವರಿಂದ ವೈದ್ಯಕೀಯ ಮಾಹಿತಿ ಪಡೆಯಲು ಕರೆ ಬಂದಿದ್ದು, ಅವರ ನವಜಾತ ಶಿಶುವಿಗೆ ಮೆದುಳು ಮತ್ತು ರಕ್ತದ ಸೋಂಕು ಸಂಬಂಧಿತ ಸಮಸ್ಯೆಗಳಿದ್ದವು. ದುರಾದೃಷ್ಟವಶಾತ್ ಆ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಇವರಿಗೆ ಔಷಧ ಪ್ರಮಾಣ (medicine dosage), ಮುನ್ಸೂಚನೆ ಮತ್ತು ತಿದ್ದುಪಡಿಯಲ್ಲಿ ವ್ಯಾಪಕ ಸಂಶೋಧನೆಯ ಮೂಲಕ ನವಜಾತ ಶಿಶು ಔಷಧ ಶಾಸ್ತ್ರ ಕ್ಷೇತ್ರದಲ್ಲಿ ಕೊಡುಗೆ ನೀಡಲು ಆಸಕ್ತಿಯನ್ನು ಹುಟ್ಟು ಹಾಕಿತು. ಇವರ ಆಸಕ್ತಿಗೆ ತಕ್ಕಂತೆ ಇದೆ ವಿಷಯದಲ್ಲೇ ಸಂಶೋಧನೆ(ಪಿಎಚ್‌ಡಿ) ಮಾಡಲು ಅವಕಾಶ ಲಭಿಸಿತು. ಡಾ. ಲೆಸ್ಲಿ ಲೂಯಿಸ್ (Leslie Lewis), ನವಜಾತ ಶಿಶುವಿನ ತಜ್ಞರು, ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಂಡಿಸಿ 2019ರಲ್ಲಿ ನವಜಾತ ಶಿಶು ಔಷಧ ಶಾಸ್ತ್ರ (Neonatal pharmacology - Pharmacometric) ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದುಕೊಂಡರು. 


    ಶಿವಕುಮಾರ್‌ರವರು 2015ರಲ್ಲಿ ಪಾಪುಲೇಷನ್ ಅಪ್ರೋಚ್ ಗ್ರೂಪ್ ಆಫ್ ಇಂಡಿಯಾ (PAGIN) ವತಿಯಿಂದ ಸಂಶೋಧನೆ ಮತ್ತು ವೈದ್ಯಕೀಯ ಔಷಧ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಗಳನ್ನು ಆಧರಿಸಿ ಅತ್ಯುನ್ನತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ 2017ರಲ್ಲಿ ಸ್ವೀಡನ್ ಉಪ್ಪಸಲ ವಿಶ್ವವಿದ್ಯಾಲಯ (Sweden Uppsala University) ಔಷಧ ಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿ ಅಂತರಾಷ್ಟ್ರೀಯ ನೋವಾರ್ಟಿಸ್ (Novartis) ಪ್ರಶಸ್ತಿಯನ್ನು ಸಹ ಶಿವಕುಮಾರ್ ಪಡೆದುಕೊಂಡಿದ್ದಾರೆ. ಈ ಪ್ರಶಸ್ತಿಯು ಅಂತರಾಷ್ಟ್ರೀಯ ಔಷಧಶಾಸ್ತ್ರ ಸಮುದಾಯದ ಅತಿ ಉನ್ನತ ಪ್ರಶಸ್ತಿಯಲ್ಲಿ ಒಂದೆಂದು ಪರಿಗಣಿಸಲಾಗಿದೆ. 2018ರಲ್ಲಿ ಸೈನ್ಸ್ ಅಂಡ್ ಇಂಜಿನಿಯರಿಂಗ್ ರಿಸರ್ಚ್ ಬೋರ್ಡ್ (SERB) ವತಿಯಿಂದ ಇವರ ಸಂಶೋಧನೆಗಾಗಿ ಸರಿಸುಮಾರು 16,41,000 ರು. ಅನುದಾನ ಲಭಿಸಿರುತ್ತದೆ. 2019ರಲ್ಲಿ ಸ್ವಿಟ್ಜರ್‌ಲ್ಯಾಂಡ್ (Switzerland) ನಲ್ಲಿ ನಡೆದ ಯೂರೋಪಿಯನ್ ಸೊಸೈಟಿ ಆಫ್ ಡೆವಲಪ್‌ಮೆಂಟಲ್ ಪೆರಿನಾಟಲ್ ಅಂಡ್ ಪೆಡಿಯಾಟ್ರಿಕ್ ಫಾರ್ಮಾಕೊಲಜಿ (ESDPPP) ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಶಿವಕುಮಾರ್‌ರವರು ತಮ್ಮ ಸಂಶೋಧನಾ ವರದಿ ಮಂಡಿಸಲು ಆಯ್ಕೆಯಾಗಿದ್ದರು. ಸಮ್ಮೇಳನ ನೋಂದಾಣಿ ಹಾಗು ಪ್ರಯಾಣ ವೆಚ್ಚವನ್ನು ಬಹುಮಾನದ ರೂಪದಲ್ಲಿ ಪಡೆದುಕೊಂಡಿದ್ದರು. 

 2021 ರಲ್ಲಿ ಎಲ್ಸೆವಿಯರ್ ಪ್ರಕಾಶನ ಪ್ರಕಟಿಸಿದ ʻನ್ಯಾನೋ-ಫಾರ್ಮಾಕೊಕಿಟಿಕ್ಸ್ ಅಂಡ್ ಥೆರನೊಸ್ಟಿಕ್ಸ್ : ಅಡ್ವಾನ್ಸಿಂಗ್ ಕ್ಯಾನ್ಸರ್ ಥೆರಾಪಿʼ ಎಂಬ ಪುಸ್ತಕದಲ್ಲಿ ನ್ಯಾನೋ-ಫಾರ್ಮಾಕೊಕಿಟಿಕ್ ಕುರಿತು ಒಂದು ಅಧ್ಯಯನ ಸಹ ಶಿವಕುಮಾರ್ ಬರೆದಿದ್ದಾರೆ. ಇದುವರೆಗೂ 12ಕ್ಕೂ ಹೆಚ್ಚು ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಿಮರ್ಶನ ವೈಜ್ಞಾನಿಕ ಲೇಖನ ಗಳನ್ನು ಬರೆದಿದ್ದಾರೆ. ಅಲ್ಲದೆ 8ಕ್ಕೂ ಹೆಚ್ಚು ಹಸ್ತಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದಾರೆ. ಈ ನಡುವೆ ಶಿವಕುಮಾರ್‌ರವರಿಗೆ ಮುಂಬರುವ ಯೂರೋಪಿಯನ್ ಸೊಸೈಟಿ ಆಫ್ ಮೆಡಿಸಿನ್ ನವಜಾತ ಶಿಶು ಔಷಧ ಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ಕುರಿತಾಗಿ ಹಸ್ತ ಪತ್ರಿಕೆಗಳ ಬೇಡಿಕೆ ಬಂದಿವೆ. 

2019ರಲ್ಲಿ ಅಮೇರಿಕಾದ ಟೆನ್ನಿಸ್ಸಿಯಲ್ಲಿರುವ ಯೂನಿಯನ್ ಯುನಿವರ್ಸಿಟಿ ಪೋಸ್ಟ್ ಆಫ್ ರೇಟ್ ಸಂಶೋಧಕರಾಗಿ ಶಿವಕುಮಾರ್ ಆಯ್ಕೆಯಾಗಿದ್ದರು. ಇದರ ನಂತರ ಎರಡು ವರ್ಷಗಳ ಕಾಲ ಅಮೇರಿಕದ ಒಂದು ಸಿಆರ್‌ಓನಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ವೈದ್ಯಕೀಯ ಔಷಧ ಶಾಸ್ತ್ರ ವಿಜ್ಞಾನಿಯಾಗಿ ಅಮೇರಿಕದ ಔಷಧ ಉತ್ಪಾದನಾ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಗಾಗಿ ಹಂಬಲಿಸುತ್ತಿರುವ ಶಿವಕುಮಾರ್‌ರವರಿಗೆ ಮಾತೃದೇಶದ ಜನರ ಪ್ರೀತಿ, ಸಹಕಾರ ಹಾಗು ಆಶೀರ್ವಾದ ಅಗತ್ಯವಿದೆ. 

 



ಶುಕ್ರವಾರ, ಜೂನ್ 21, 2024

ಅನನ್ಯ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆ

ಭದ್ರಾವತಿ ಅಪ್ಪರ್ ಹುತ್ತಾ ಅನನ್ಯ ಶಾಲೆ ಆವರಣದಲ್ಲಿ ಅನನ್ಯ ಎಜುಕೇಶನ್ ಟ್ರಸ್ಟ್‌ವತಿಯಿಂದ ವಿಐಎಸ್‌ಎಲ್ ಕಾರ್ಖಾನೆ ಸಹಯೋಗದೊಂದಿಗೆ ಶುಕ್ರವಾರ ವಿಶ್ವ ಯೋಗ ದಿನಾಚರಣೆ ಯಶಸ್ವಿಯಾಗಿ ಜರುಗಿತು.
    ಭದ್ರಾವತಿ: ನಗರದ ಅಪ್ಪರ್ ಹುತ್ತಾ ಅನನ್ಯ ಶಾಲೆ ಆವರಣದಲ್ಲಿ ಅನನ್ಯ ಎಜುಕೇಶನ್ ಟ್ರಸ್ಟ್‌ವತಿಯಿಂದ ವಿಐಎಸ್‌ಎಲ್ ಕಾರ್ಖಾನೆ ಸಹಯೋಗದೊಂದಿಗೆ ಶುಕ್ರವಾರ ವಿಶ್ವ ಯೋಗ ದಿನಾಚರಣೆ ಯಶಸ್ವಿಯಾಗಿ ಜರುಗಿತು.
    ದೈಹಿಕ ಶಿಕ್ಷಕ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯೋಗ ಕೇಂದ್ರದ ಯೋಗ ಪಟುಗಳು ಯೋಗಾಸನ ಪ್ರದರ್ಶಿಸಿದರು. ಟ್ರಸ್ಟ್ ಕಾರ್ಯದರ್ಶಿ  ಬಿ.ಎಸ್ ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
    ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೆ.ಎಸ್. ಸುರೇಶ್, ಎಲ್. ಪ್ರವೀಣ್ ಕುಮಾರ್ ಮತ್ತು ಶೋಭಾ ಶಿವಶಂಕರನ್, ಶಾಲೆಯ ಆಡಳಿತಾಧಿಕಾರಿ ವೇಣುಗೋಪಾಲ್, ಅನನ್ಯ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕೆ. ಕಲ್ಲೇಶ್ ಕುಮಾರ್ ಹಾಗೂ ಅನನ್ಯ ಹ್ಯಾಪಿ ಹಾರ್ಟ್ಸ್ ಮುಖ್ಯ ಶಿಕ್ಷಕಿ ತನುಜಾ ಅನಿಲ್ ಮತ್ತು ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
    ಶಾರದಾ ಶ್ರೀನಿವಾಸ್‌ರವರ ಯೋಗ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಿ.ಎಸ್ ಶುಭ ಕೋಠಿ ಸ್ವಾಗತಿಸಿ, ಬಿ.ಎಚ್ ಕವನ ನಿರೂಪಿಸಿದರು.  ಕೆ.ಯು ಕೀರ್ತಿ ವಂದಿಸಿದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರಿಗೂ ಆರೋಗ್ಯ ಅರಿವು ಮುಖ್ಯ : ಡಾ. ಎಂ.ವಿ ಅಶೋಕ್

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಗ್ಯು ದಿನಾಚರಣೆ ಹಾಗು ಕಾರ್ಯಾಗಾರ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಉದ್ಘಾಟಿಸಿದರು.
    ಭದ್ರಾವತಿ: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ  ಸಹಕಾರ ಅಗತ್ಯವಾಗಿದೆ. ಶಿಕ್ಷಕರು ಜಾಗೃತರಾಗುವುದರಿಂದ ಮಕ್ಕಳಲ್ಲಿ ಅರಿವು ಮೂಡಿಸಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಗ್ಯು ದಿನಾಚರಣೆ ಹಾಗು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಆಗಸ್ಟ್ ಮತ್ತು ಜೂನ್ ತಿಂಗಳಲ್ಲಿ ಆರಂಭಗೊಳ್ಳುವ ಮಳೆಯಿಂದ ಚರಂಡಿ ಮತ್ತು ಇತರೆಡೆ ಸಂಗ್ರಹಗೊಳ್ಳುವ ನೀರಿನಿಂದ ಸೊಳ್ಳೆಗಳ ಹಾವಳಿ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡಲು ಆರಂಭವಾಗುತ್ತದೆ. ಒಂದು ಸೊಳ್ಳೆ ೨೦೦ ರಿಂದ ೪೦೦ ಮೊಟ್ಟೆ ಇಟ್ಟು ತನ್ನ ಸಂತಾಭಿವೃದ್ಧಿಯನ್ನು ಮಾಡುತ್ತದೆ. ಇದರಿಂದ ನೀವು ರೋಗ ಹರಡುವ ತೀವ್ರತೆಯನ್ನು ತಿಳಿಯಬಹುದು ಎಂದರು.
    ಡೆಂಗ್ಯೂ ಜ್ವರ ಒಂದು ಮಾರಕ ಕಾಯಿಲೆಯಾಗಿದ್ದು, ಇದು ಏಡೀಸ್ ಈಜಿಪ್ಟ್ ಎಂಬ ಸೊಳ್ಳೆಯ ಕಟ್ಟುವಿಕೆಯಿಂದ ಹರಡುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆ ನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುವುದು ಡೆಂಗ್ಯೂ ಕಾಯಿಲೆ ಲಕ್ಷಣಗಳಾಗಿವೆ. ಈ ಕಾಯಿಲೆಗೆ ಯಾವುದೇ ನಿರ್ಧಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳ ಅನುಸಾರವಾಗಿ ವೈದ್ಯರಿಂದ ಪರೀಕ್ಷಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದರು.
    ಮನೆಯ ಸುತ್ತ ನಿಂತ ನೀರು, ಸರಿಯಾಗಿ ಮುಚ್ಚದಿರುವ ನೀರು ಶೇಖರಣೆಯ ಬಕೆಟ್, ಬಾನಿ, ಸಿಮೆಂಟ್ ತೊಟ್ಟಿ, ಬ್ಯಾರಲ್, ಡ್ರಮ್ ಇತ್ಯಾದಿ ಹಾಗು ಹೂವಿನ ಕುಂಡ, ಏರ್ ಕೂಲರ್, ಫ್ರಡ್ಜ್ ಹಾಗು ಘನ ತ್ಯಾಜ್ಯಗಳಾದ ಬೇಡವಾದ ಡಬ್ಬ, ಒಡೆದ ಬಾಟಲಿ, ಟಯರ್, ಒಳಕಲ್ಲು, ತೆಂಗಿನಚಿಪ್ಪು, ಅಡಕೆ ಹಾಳೆ ಇತ್ಯಾದಿಗಳಲ್ಲಿ ಸಂಗ್ರಹಣೆಯಾದ ನೀರಿನಲ್ಲಿ ಏಡೀಸ್ ಈಜಿಪ್ಟ್ ಸೊಳ್ಳೆಗಳು ಮೊಟ್ಟೆಗಳನ್ನು ಇಟ್ಟು ತನ್ನ ಸಂತಾನಾಭಿವೃದ್ಧಿ ಮಾಡುತ್ತವೆ. ಈ ಹಿನ್ನಲೆಯಲ್ಲಿ ನೀರು ಸಂಗ್ರಹಣೆಯಾಗದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ನಿಯಂತ್ರಣ ಒಂದೇ ಈ ಕಾಯಿಲೆ ಹತೋಟಿಗೆ ಮುಖ್ಯ ವಿಧಾನವಾಗಿದೆ. ಈ ಹಿನ್ನಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
    ಡೆಂಗ್ಯು ಸೇರಿದಂತೆ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಇಂದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಎಲ್ಲಾ ಸಮಸ್ಯೆಗಳನ್ನು ಆರೋಗ್ಯ ಇಲಾಖೆಯಿಂದಲೇ ಬಗೆಹರಿಸಲು ಸಾಧ್ಯವಿಲ್ಲ. ವಿವಿಧ ಇಲಾಖೆಗಳು ಹಾಗು ಸಾರ್ವಜನಿಕರ ಸಹಕಾರ ಬಹುಮುಖ್ಯ ಎಂದರು.
    ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಆನಂದಮೂರ್ತಿ, ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಬಾಯಿ, ಸಿಬ್ಬಂದಿ ಅಂಕಿತ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗು ಶಿಕ್ಷಣ ಇಲಾಖೆಯ ವಿಜ್ಞಾನ ಶಿಕ್ಷಕರುಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ, ಜೂನ್ 11, 2024

ಕೂಡ್ಲಿಗೆರೆ ಗ್ರಾಮದಲ್ಲಿ ಡಿಎಸ್‌ಎಸ್ ಮಹಿಳಾ ಘಟಕ ಉದ್ಘಾಟನೆ


ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ಅಸ್ತಿತ್ವಕ್ಕೆ ಬಂದಿದ್ದು, ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ನಾಮಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು
    ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ಅಸ್ತಿತ್ವಕ್ಕೆ ಬಂದಿದ್ದು, ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ನಾಮಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.
    ಪ್ರೊ. ಬಿ. ಕೃಷ್ಣಪ್ಪನವರ ಆಶಯದಂತೆ ಸಮಿತಿ ಜಿಲ್ಲಾ ಮತ್ತು ತಾಲೂಕು ಹಾಗು ಗ್ರಾಮ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಹಿಳಾ ಘಟಕ ಸಹ ಮುಂಚೂಣಿಗೆ ಬಂದಿದೆ.
    ಕಾರ್ಯಕ್ರಮದಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಕೆ. ರಂಗನಾಥ್, ಜಿಲ್ಲಾ  ಸಂಘಟನಾ ಸಂಚಾಲಕ ಈಶ್ವರಪ್ಪ, ಜಿಲ್ಲಾ ಸಮಿತಿ ಸದಸ್ಯ ಶಿವಶಂಕರ್, ತಾಲೂಕು ನಗರ ಸಂಚಾಲಕ ಪ್ರಸನ್ನ, ದಲಿತ ಮಹಿಳಾ ಒಕ್ಕೂಟದ ಶಾಂತಿ ಸೇರಿದಂತೆ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು, ಮಹಿಳಾ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಗುರುವಾರ, ಜೂನ್ 6, 2024

ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಭದ್ರಾವತಿ ಪೇಪರ್‌ಟೌನ್ ಪೊಲೀಸ್ ಠಾಣೆ ವತಿಯಿಂದ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ಪೇಪರ್‌ಟೌನ್ ಪೊಲೀಸ್ ಠಾಣೆ ವತಿಯಿಂದ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಶಾಲೆಯ ಸಿ.ವಿ ರಾಮನ್ ಇಕೋ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೋಕ್ಸೋ ಕಾಯ್ದೆ, ೧೧೨ ತುರ್ತು ಸಹಾಯವಾಣಿ, ಸಾಮಾಜಿಕ ಜಾಲತಾಣದ ಸುರಕ್ಷಿತ ಬಳಕೆ, ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡಲಾಯಿತು.
    ಠಾಣೆಯ ಪೊಲೀಸ್ ನಿರೀಕ್ಷಕಿ ನಾಗಮ್ಮ ಹಾಗು ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಶಿಕ್ಷಕ ವರ್ಗದವರು ಸೇರಿದಂತೆ ಇನ್ನಿರರು ಉಪಸ್ಥಿತರಿದ್ದರು.

ಪ್ಲಾಸ್ಟಿಕ್ ಬಳಕೆ ಹೆಚ್ಚಳ : ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ

ಭದ್ರಾವತಿ ನಗರದ ಉಜ್ಜನಿಪುರದಲ್ಲಿ ಡಾನ್ ಬೋಸ್ಕೊ ಕೈಗಾರಿಕಾ ಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ: ವೇಗದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಳವಾಗುತ್ತಿದ್ದು, ಇದು ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಈ ಬಗ್ಗೆ ಸರ್ವರಿಗೂ ಜಾಗೃತಿ ಅಗತ್ಯ ಎಂದು ಡಾನ್ ಬೋಸ್ಕೊ ಕೈಗಾರಿಕಾ ಸಂಸ್ಥೆ ನಿರ್ದೇಶಕ ಫಾದರ್ ಕ್ರಿಸ್ತೊ ರಾಜ್ ಹೇಳಿದರು.
    ನಗರದ ಉಜ್ಜನಿಪುರದಲ್ಲಿ ಡಾನ್ ಬೋಸ್ಕೊ ಕೈಗಾರಿಕಾ ಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಬಹಳಷ್ಟು ಖಾಯಿಲೆಗಳಿಗೆ ಪ್ಲಾಸ್ಟಿಕ್ ಬಳಕೆ ಹೆಚ್ಚಳ ಕಾರಣ. ಪರಿಸರ ನಾಶದಿಂದ ಜನಜೀವನ ದುಷ್ಪರಿಣಾಮ ಎದುರಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಬೇರೆಯವರಿಂದ ಪರಿಸರ ಸಂರಕ್ಷಣೆಯನ್ನು ನಿರೀಕ್ಷಿಸದೆ ಸ್ವಯಂ ಪ್ರೇರಣೆಯಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
    ಮೈಸೂರು ಕಾಗದ ಕಾರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಧರ್ಮಲಿಂಗಸ್ವಾಮಿ ಮಾತನಾಡಿ, ಬಾಲ್ಯದಿಂದಲೇ ಯಾರಿಗೂ ಪರಿಸರದ ಕಾಳಜಿ ಇರುವುದಿಲ್ಲ. ನಾವು ಬೆಳೆದಂತೆ ನಮ್ಮಲ್ಲಿ ಪರಿಸರ ಕಾಳಜಿಯನ್ನೂ ಬೆಳೆಸಿಕೊಳ್ಳಬೇಕು. ಪರಿಸರ ರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯ ತಡೆ ವಿಚಾರವನ್ನು ವಿದ್ಯಾರ್ಥಿಗಳು ಜವಾಬ್ದಾರಿ ಎಂದು ಭಾವಿಸಬೇಕು ಎಂದರು.
    ಪೋಷಕರು ಮಕ್ಕಳಲ್ಲಿ ವಿದ್ಯೆಯ ಬಗ್ಗೆ ಅರಿವು ಮೂಡಿಸಿದಂತೆಯೇ ಪರಿಸರದ ಜಾಗೃತಿಯನ್ನು ಮೂಡಿಸುವುದು ಪೋಷಕರ ಕರ್ತವ್ಯ. ಪರಿಸರ ರಕ್ಷಣೆ ಬಗ್ಗೆ ಕೇವಲ ಮಾತುಗಳಿಂದ ಉಪಯೋಗವಿಲ್ಲ. ಮನೆಯಿಂದಲೇ ಪರಿಸರ ರಕ್ಷಣೆಯ ಅರಿವು ಮೂಡಬೇಕು. ಆಗ ಮಾತ್ರ ಉತ್ತಮ ಪರಿಸರ ಕಾಣಲು ಸಾಧ್ಯ ಎಂದರು
    ಕಾಂಗ್ರೆಸ್ ಮುಖಂಡ ಮಹಮದ್ ರಫಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಇಕೋ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆ : ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ

  ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಸಸ...