ಶುಕ್ರವಾರ, ಜೂನ್ 21, 2024

ಅನನ್ಯ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಣೆ

ಭದ್ರಾವತಿ ಅಪ್ಪರ್ ಹುತ್ತಾ ಅನನ್ಯ ಶಾಲೆ ಆವರಣದಲ್ಲಿ ಅನನ್ಯ ಎಜುಕೇಶನ್ ಟ್ರಸ್ಟ್‌ವತಿಯಿಂದ ವಿಐಎಸ್‌ಎಲ್ ಕಾರ್ಖಾನೆ ಸಹಯೋಗದೊಂದಿಗೆ ಶುಕ್ರವಾರ ವಿಶ್ವ ಯೋಗ ದಿನಾಚರಣೆ ಯಶಸ್ವಿಯಾಗಿ ಜರುಗಿತು.
    ಭದ್ರಾವತಿ: ನಗರದ ಅಪ್ಪರ್ ಹುತ್ತಾ ಅನನ್ಯ ಶಾಲೆ ಆವರಣದಲ್ಲಿ ಅನನ್ಯ ಎಜುಕೇಶನ್ ಟ್ರಸ್ಟ್‌ವತಿಯಿಂದ ವಿಐಎಸ್‌ಎಲ್ ಕಾರ್ಖಾನೆ ಸಹಯೋಗದೊಂದಿಗೆ ಶುಕ್ರವಾರ ವಿಶ್ವ ಯೋಗ ದಿನಾಚರಣೆ ಯಶಸ್ವಿಯಾಗಿ ಜರುಗಿತು.
    ದೈಹಿಕ ಶಿಕ್ಷಕ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಯೋಗ ಕೇಂದ್ರದ ಯೋಗ ಪಟುಗಳು ಯೋಗಾಸನ ಪ್ರದರ್ಶಿಸಿದರು. ಟ್ರಸ್ಟ್ ಕಾರ್ಯದರ್ಶಿ  ಬಿ.ಎಸ್ ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
    ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೆ.ಎಸ್. ಸುರೇಶ್, ಎಲ್. ಪ್ರವೀಣ್ ಕುಮಾರ್ ಮತ್ತು ಶೋಭಾ ಶಿವಶಂಕರನ್, ಶಾಲೆಯ ಆಡಳಿತಾಧಿಕಾರಿ ವೇಣುಗೋಪಾಲ್, ಅನನ್ಯ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕೆ. ಕಲ್ಲೇಶ್ ಕುಮಾರ್ ಹಾಗೂ ಅನನ್ಯ ಹ್ಯಾಪಿ ಹಾರ್ಟ್ಸ್ ಮುಖ್ಯ ಶಿಕ್ಷಕಿ ತನುಜಾ ಅನಿಲ್ ಮತ್ತು ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
    ಶಾರದಾ ಶ್ರೀನಿವಾಸ್‌ರವರ ಯೋಗ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಿ.ಎಸ್ ಶುಭ ಕೋಠಿ ಸ್ವಾಗತಿಸಿ, ಬಿ.ಎಚ್ ಕವನ ನಿರೂಪಿಸಿದರು.  ಕೆ.ಯು ಕೀರ್ತಿ ವಂದಿಸಿದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರಿಗೂ ಆರೋಗ್ಯ ಅರಿವು ಮುಖ್ಯ : ಡಾ. ಎಂ.ವಿ ಅಶೋಕ್

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಗ್ಯು ದಿನಾಚರಣೆ ಹಾಗು ಕಾರ್ಯಾಗಾರ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಉದ್ಘಾಟಿಸಿದರು.
    ಭದ್ರಾವತಿ: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ  ಸಹಕಾರ ಅಗತ್ಯವಾಗಿದೆ. ಶಿಕ್ಷಕರು ಜಾಗೃತರಾಗುವುದರಿಂದ ಮಕ್ಕಳಲ್ಲಿ ಅರಿವು ಮೂಡಿಸಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಗ್ಯು ದಿನಾಚರಣೆ ಹಾಗು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಆಗಸ್ಟ್ ಮತ್ತು ಜೂನ್ ತಿಂಗಳಲ್ಲಿ ಆರಂಭಗೊಳ್ಳುವ ಮಳೆಯಿಂದ ಚರಂಡಿ ಮತ್ತು ಇತರೆಡೆ ಸಂಗ್ರಹಗೊಳ್ಳುವ ನೀರಿನಿಂದ ಸೊಳ್ಳೆಗಳ ಹಾವಳಿ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡಲು ಆರಂಭವಾಗುತ್ತದೆ. ಒಂದು ಸೊಳ್ಳೆ ೨೦೦ ರಿಂದ ೪೦೦ ಮೊಟ್ಟೆ ಇಟ್ಟು ತನ್ನ ಸಂತಾಭಿವೃದ್ಧಿಯನ್ನು ಮಾಡುತ್ತದೆ. ಇದರಿಂದ ನೀವು ರೋಗ ಹರಡುವ ತೀವ್ರತೆಯನ್ನು ತಿಳಿಯಬಹುದು ಎಂದರು.
    ಡೆಂಗ್ಯೂ ಜ್ವರ ಒಂದು ಮಾರಕ ಕಾಯಿಲೆಯಾಗಿದ್ದು, ಇದು ಏಡೀಸ್ ಈಜಿಪ್ಟ್ ಎಂಬ ಸೊಳ್ಳೆಯ ಕಟ್ಟುವಿಕೆಯಿಂದ ಹರಡುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆ ನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಮತ್ತು ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುವುದು ಡೆಂಗ್ಯೂ ಕಾಯಿಲೆ ಲಕ್ಷಣಗಳಾಗಿವೆ. ಈ ಕಾಯಿಲೆಗೆ ಯಾವುದೇ ನಿರ್ಧಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳ ಅನುಸಾರವಾಗಿ ವೈದ್ಯರಿಂದ ಪರೀಕ್ಷಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬಹುದು ಎಂದರು.
    ಮನೆಯ ಸುತ್ತ ನಿಂತ ನೀರು, ಸರಿಯಾಗಿ ಮುಚ್ಚದಿರುವ ನೀರು ಶೇಖರಣೆಯ ಬಕೆಟ್, ಬಾನಿ, ಸಿಮೆಂಟ್ ತೊಟ್ಟಿ, ಬ್ಯಾರಲ್, ಡ್ರಮ್ ಇತ್ಯಾದಿ ಹಾಗು ಹೂವಿನ ಕುಂಡ, ಏರ್ ಕೂಲರ್, ಫ್ರಡ್ಜ್ ಹಾಗು ಘನ ತ್ಯಾಜ್ಯಗಳಾದ ಬೇಡವಾದ ಡಬ್ಬ, ಒಡೆದ ಬಾಟಲಿ, ಟಯರ್, ಒಳಕಲ್ಲು, ತೆಂಗಿನಚಿಪ್ಪು, ಅಡಕೆ ಹಾಳೆ ಇತ್ಯಾದಿಗಳಲ್ಲಿ ಸಂಗ್ರಹಣೆಯಾದ ನೀರಿನಲ್ಲಿ ಏಡೀಸ್ ಈಜಿಪ್ಟ್ ಸೊಳ್ಳೆಗಳು ಮೊಟ್ಟೆಗಳನ್ನು ಇಟ್ಟು ತನ್ನ ಸಂತಾನಾಭಿವೃದ್ಧಿ ಮಾಡುತ್ತವೆ. ಈ ಹಿನ್ನಲೆಯಲ್ಲಿ ನೀರು ಸಂಗ್ರಹಣೆಯಾಗದಂತೆ ಎಚ್ಚರ ವಹಿಸಬೇಕು. ಸೊಳ್ಳೆಗಳ ನಿಯಂತ್ರಣ ಒಂದೇ ಈ ಕಾಯಿಲೆ ಹತೋಟಿಗೆ ಮುಖ್ಯ ವಿಧಾನವಾಗಿದೆ. ಈ ಹಿನ್ನಲೆಯಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
    ಡೆಂಗ್ಯು ಸೇರಿದಂತೆ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಇಂದು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಎಲ್ಲಾ ಸಮಸ್ಯೆಗಳನ್ನು ಆರೋಗ್ಯ ಇಲಾಖೆಯಿಂದಲೇ ಬಗೆಹರಿಸಲು ಸಾಧ್ಯವಿಲ್ಲ. ವಿವಿಧ ಇಲಾಖೆಗಳು ಹಾಗು ಸಾರ್ವಜನಿಕರ ಸಹಕಾರ ಬಹುಮುಖ್ಯ ಎಂದರು.
    ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಆನಂದಮೂರ್ತಿ, ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಬಾಯಿ, ಸಿಬ್ಬಂದಿ ಅಂಕಿತ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗು ಶಿಕ್ಷಣ ಇಲಾಖೆಯ ವಿಜ್ಞಾನ ಶಿಕ್ಷಕರುಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ, ಜೂನ್ 11, 2024

ಕೂಡ್ಲಿಗೆರೆ ಗ್ರಾಮದಲ್ಲಿ ಡಿಎಸ್‌ಎಸ್ ಮಹಿಳಾ ಘಟಕ ಉದ್ಘಾಟನೆ


ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ಅಸ್ತಿತ್ವಕ್ಕೆ ಬಂದಿದ್ದು, ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ನಾಮಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು
    ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಿಳಾ ಘಟಕ ಅಸ್ತಿತ್ವಕ್ಕೆ ಬಂದಿದ್ದು, ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ನಾಮಫಲಕ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.
    ಪ್ರೊ. ಬಿ. ಕೃಷ್ಣಪ್ಪನವರ ಆಶಯದಂತೆ ಸಮಿತಿ ಜಿಲ್ಲಾ ಮತ್ತು ತಾಲೂಕು ಹಾಗು ಗ್ರಾಮ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಹಿಳಾ ಘಟಕ ಸಹ ಮುಂಚೂಣಿಗೆ ಬಂದಿದೆ.
    ಕಾರ್ಯಕ್ರಮದಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ, ತಾಲೂಕು ಸಂಚಾಲಕ ಕೆ. ರಂಗನಾಥ್, ಜಿಲ್ಲಾ  ಸಂಘಟನಾ ಸಂಚಾಲಕ ಈಶ್ವರಪ್ಪ, ಜಿಲ್ಲಾ ಸಮಿತಿ ಸದಸ್ಯ ಶಿವಶಂಕರ್, ತಾಲೂಕು ನಗರ ಸಂಚಾಲಕ ಪ್ರಸನ್ನ, ದಲಿತ ಮಹಿಳಾ ಒಕ್ಕೂಟದ ಶಾಂತಿ ಸೇರಿದಂತೆ ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮುಖಂಡರು, ಮಹಿಳಾ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಗುರುವಾರ, ಜೂನ್ 6, 2024

ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಭದ್ರಾವತಿ ಪೇಪರ್‌ಟೌನ್ ಪೊಲೀಸ್ ಠಾಣೆ ವತಿಯಿಂದ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ಪೇಪರ್‌ಟೌನ್ ಪೊಲೀಸ್ ಠಾಣೆ ವತಿಯಿಂದ ಬಾಳೆಮಾರನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಶಾಲೆಯ ಸಿ.ವಿ ರಾಮನ್ ಇಕೋ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೋಕ್ಸೋ ಕಾಯ್ದೆ, ೧೧೨ ತುರ್ತು ಸಹಾಯವಾಣಿ, ಸಾಮಾಜಿಕ ಜಾಲತಾಣದ ಸುರಕ್ಷಿತ ಬಳಕೆ, ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಶಾಲಾ ಮಕ್ಕಳಿಗೆ ಮಾಹಿತಿ ನೀಡಲಾಯಿತು.
    ಠಾಣೆಯ ಪೊಲೀಸ್ ನಿರೀಕ್ಷಕಿ ನಾಗಮ್ಮ ಹಾಗು ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಶಿಕ್ಷಕ ವರ್ಗದವರು ಸೇರಿದಂತೆ ಇನ್ನಿರರು ಉಪಸ್ಥಿತರಿದ್ದರು.

ಪ್ಲಾಸ್ಟಿಕ್ ಬಳಕೆ ಹೆಚ್ಚಳ : ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ

ಭದ್ರಾವತಿ ನಗರದ ಉಜ್ಜನಿಪುರದಲ್ಲಿ ಡಾನ್ ಬೋಸ್ಕೊ ಕೈಗಾರಿಕಾ ಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಭದ್ರಾವತಿ: ವೇಗದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಳವಾಗುತ್ತಿದ್ದು, ಇದು ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಈ ಬಗ್ಗೆ ಸರ್ವರಿಗೂ ಜಾಗೃತಿ ಅಗತ್ಯ ಎಂದು ಡಾನ್ ಬೋಸ್ಕೊ ಕೈಗಾರಿಕಾ ಸಂಸ್ಥೆ ನಿರ್ದೇಶಕ ಫಾದರ್ ಕ್ರಿಸ್ತೊ ರಾಜ್ ಹೇಳಿದರು.
    ನಗರದ ಉಜ್ಜನಿಪುರದಲ್ಲಿ ಡಾನ್ ಬೋಸ್ಕೊ ಕೈಗಾರಿಕಾ ಸಂಸ್ಥೆಯಲ್ಲಿ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಬಹಳಷ್ಟು ಖಾಯಿಲೆಗಳಿಗೆ ಪ್ಲಾಸ್ಟಿಕ್ ಬಳಕೆ ಹೆಚ್ಚಳ ಕಾರಣ. ಪರಿಸರ ನಾಶದಿಂದ ಜನಜೀವನ ದುಷ್ಪರಿಣಾಮ ಎದುರಿಸುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಬೇರೆಯವರಿಂದ ಪರಿಸರ ಸಂರಕ್ಷಣೆಯನ್ನು ನಿರೀಕ್ಷಿಸದೆ ಸ್ವಯಂ ಪ್ರೇರಣೆಯಿಂದ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
    ಮೈಸೂರು ಕಾಗದ ಕಾರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಧರ್ಮಲಿಂಗಸ್ವಾಮಿ ಮಾತನಾಡಿ, ಬಾಲ್ಯದಿಂದಲೇ ಯಾರಿಗೂ ಪರಿಸರದ ಕಾಳಜಿ ಇರುವುದಿಲ್ಲ. ನಾವು ಬೆಳೆದಂತೆ ನಮ್ಮಲ್ಲಿ ಪರಿಸರ ಕಾಳಜಿಯನ್ನೂ ಬೆಳೆಸಿಕೊಳ್ಳಬೇಕು. ಪರಿಸರ ರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯ ತಡೆ ವಿಚಾರವನ್ನು ವಿದ್ಯಾರ್ಥಿಗಳು ಜವಾಬ್ದಾರಿ ಎಂದು ಭಾವಿಸಬೇಕು ಎಂದರು.
    ಪೋಷಕರು ಮಕ್ಕಳಲ್ಲಿ ವಿದ್ಯೆಯ ಬಗ್ಗೆ ಅರಿವು ಮೂಡಿಸಿದಂತೆಯೇ ಪರಿಸರದ ಜಾಗೃತಿಯನ್ನು ಮೂಡಿಸುವುದು ಪೋಷಕರ ಕರ್ತವ್ಯ. ಪರಿಸರ ರಕ್ಷಣೆ ಬಗ್ಗೆ ಕೇವಲ ಮಾತುಗಳಿಂದ ಉಪಯೋಗವಿಲ್ಲ. ಮನೆಯಿಂದಲೇ ಪರಿಸರ ರಕ್ಷಣೆಯ ಅರಿವು ಮೂಡಬೇಕು. ಆಗ ಮಾತ್ರ ಉತ್ತಮ ಪರಿಸರ ಕಾಣಲು ಸಾಧ್ಯ ಎಂದರು
    ಕಾಂಗ್ರೆಸ್ ಮುಖಂಡ ಮಹಮದ್ ರಫಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಇಕೋ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.

ಔಷಧಿ ಸಸಿಗಳನ್ನು ನೆಡುವ ಮೂಲಕ ಅನನ್ಯ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಅಪ್ಪರ್ ಹುತ್ತಾ ಅನನ್ಯ ವಿದ್ಯಾಸಂಸ್ಥೆ ವತಿಯಿಂದ ಶಾಲೆಯ ಆವರಣದಲ್ಲಿ ವಿಐಎಸ್‌ಎಲ್ ಎಥಿಕ್ಸ್ ಕ್ಲಬ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನ ಆಚರಿಸಲಾಯಿತು.
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಅಪ್ಪರ್ ಹುತ್ತಾ ಅನನ್ಯ ವಿದ್ಯಾಸಂಸ್ಥೆ ವತಿಯಿಂದ ಶಾಲೆಯ ಆವರಣದಲ್ಲಿ ವಿಐಎಸ್‌ಎಲ್ ಎಥಿಕ್ಸ್ ಕ್ಲಬ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನ ಆಚರಿಸಲಾಯಿತು.
    ವಿದ್ಯಾಸಂಸ್ಥೆ ಕಾರ್ಯದರ್ಶಿ ಬಿ.ಎಸ್ ಅನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿ.ಐ.ಎಸ್.ಎಲ್ ಕಾರ್ಖಾನೆ ನಗರಾಡಳಿತ ಇಲಾಖೆ ವ್ಯವಸ್ಥಾಪಕ ಮೋಹನ್ ರಾಜ್ ಶೆಟ್ಟಿ, ವಿಐಎಸ್‌ಎಲ್ ಆಸ್ಪತ್ರೆ ಹಾಗು ಸುರಕ್ಷತೆ ವಿಭಾಗದ ವ್ಯವಸ್ಥಾಪಕ ಬಿ. ರಘುನಾಥ್, ಸುರಕ್ಷತೆ ವಿಭಾಗದ ಉಪ ವ್ಯವಸ್ಥಾಪಕ ಎಲ್. ಕುತ್ತಲನಾಥನ್, ಸಹಾಯಕ ವ್ಯವಸ್ಥಾಪಕ ಉಮೇಶ್ ಮಧುಕರ್ ಉಕ್ಕೆ ಸೇರಿದಂತೆ ಇನ್ನಿತರರು ವಿವಿಧ ಔಷಧೀಯ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
    ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ವೇಣುಗೋಪಾಲ್, ಮುಖ್ಯ ಶಿಕ್ಷಕ ಕೆ. ಕಲ್ಲೇಶ್ ಕುಮಾರ್, ಉಪಮುಖ್ಯ ಶಿಕ್ಷಕಿಯರಾದ ಸುನಿತಾ ಹಾಗೂ ತನುಜಾ ಅನಿಲ್ ಕುಮಾರ್ ಹಾಗೂ ಅನನ್ಯ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಧಿಕಾ ನಿರೂಪಿಸಿ, ಸಂಗೀತ ಸ್ವಾಗತಿಸಿದರು ಹಾಗೂ ಅಶ್ವಿನಿ ವಂದಿಸಿದರು.

ಬುಧವಾರ, ಜೂನ್ 5, 2024

ಪರಿಸರ ನಾಶದಿಂದ ತಾಪಮಾನದಿಂದ ತಾಪಮಾನ ಹೆಚ್ಚಳ : ಸಸಿ ನೆಟ್ಟು, ಪೋಷಿಸಿ

ಪರಿಸರ ದಿನಾಚರಣೆಯಲ್ಲಿ ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್

ಭದ್ರಾವತಿ ನಗರಸಭೆ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಸಸಿ ನೆಡುವ ಮೂಲಕ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ: ಪರಿಸರ ನಾಶದಿಂದ ತಾಪಮಾನ ಹೆಚ್ಚಳವಾಗುತ್ತಿದ್ದು, ಇದರ ಪರಿಣಾಮ ನಾವುಗಳು ಇಂದು ಎದುರಿಸುತ್ತಿದ್ದೇವೆ. ಇದನ್ನು ಅರಿತುಕೊಂಡು ಪರಿಸರ ಉಳಿಸುವ ಕಾರ್ಯದಲ್ಲಿ ತೊಡಗಬೇಕೆಂದು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಕರೆ ನೀಡಿದರು.
    ಅವರು ಬುಧವಾರ ನಗರಸಭೆ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದು ಮಳೆಯ ಪ್ರಮಾಣ ಕಡಿಮೆಯಾಗಿ ಬಿಸಿಲಿನ ತಾಪ ಹೆಚ್ಚುತ್ತಿದೆ. ಅಲ್ಲದೆ ಶುದ್ಧ ಪರಿಸರ ಸಹ ಇಲ್ಲವಾಗಿದೆ. ಇದರಿಂದಾಗಿ ನಾವುಗಳು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ. ಪ್ರತಿಯೊಬ್ಬರು ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ರಕ್ಷಣೆ ಮಾಡಿ ಪೋಷಿಸಬೇಕು. ಇದರಿಂದಾಗಿ ಭವಿಷ್ಯದಲ್ಲಿ ಉತ್ತಮ ಪರಿಸರ ನಿರ್ಮಾಣವಾಗಲಿದೆ ಎಂದರು.
    ಪರಿಸರ ಅಭಿಯಂತರ ಪ್ರಭಾಕರ್, ಕಂದಾಯಾಧಿಕಾರಿ ರಾಜ್‌ಕುಮಾರ್, ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಹಿರಿಯ ಪತ್ರಕರ್ತ ಎನ್. ಬಾಬು ಸೇರಿದಂತೆ ಇನ್ನಿತರರು ಪರಿಸರ ಕಾಳಜಿ ಕುರಿತು ಮಾತನಾಡಿದರು.
    ನಗರಸಭೆ ವ್ಯವಸ್ಥಾಪಕಿ ಎಂ. ಸುನಿತಾಕುಮಾರಿ, ಸಹಾಯಕ ಕಾರ್ಯಪಾಲಕ ಅಬಿಯಂತರ ಬಿ.ಬಿ ಶಿವಪ್ರಸಾದ್, ಕಿರಿಯ ಅಭಿಯಂತರ ಕೆ. ಪ್ರಸಾದ್, ಹಿರಿಯ ಆರೋಗ್ಯ ನಿರೀಕ್ಷಕರಾದ ಆರ್.ಬಿ ಸತೀಶ್, ಆಶಾಲತಾ, ಸಂತೋಷ್ ಪಾಟೀಲ್, ಪೌರ ಸೇವಾ ನೌಕರರ ಸೇವಾ ಸಂಘದ ತಾಲೂಕು ಅಧ್ಯಕ್ಷ ಎಸ್. ಚೇತನ್ ಕುಮಾರ್, ನರಸಿಂಹಮೂರ್ತಿ, ಎಂ. ನಿತೀಶ್, ಡಿ.ಎಸ್ ಹೇಮಂತ್ ಕುಮಾರ್, ಬಸವರಾಜ ನಾಯ್ಕ, ಎಸ್. ಪವನ್ ಕುಮಾರ್, ಸುಮಿತ್ರ ಎಚ್. ಹರಪ್ಪನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭಾನುವಾರ, ಜೂನ್ 2, 2024

ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್ ಪಕ್ಷದಿಂದ ಬಲ್ಕೀಶ್ ಬಾನುಗೆ ಅವಕಾಶ

ಬಲ್ಕೀಶ್ ಬಾನು
    ಭದ್ರಾವತಿ: ಶಿಕ್ಷಕಿ ವೃತ್ತಿ ತೊರೆದು ಸುಮಾರು ೩ ದಶಕಗಳಿಗೂ ಹೆಚ್ಚಿನ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುವ ಮೂಲಕ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ನಗರದ ಅನ್ವರ್ ಕಾಲೋನಿ ನಿವಾಸಿ ಬಲ್ಕೀಶ್ ಬಾನು ಅವರಿಗೆ ಇದೀಗ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಕೊಡಲಾಗಿದೆ.
    ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಒಟ್ಟು ೮ ಜನರಿಗೆ ಅವಕಾಶ ನೀಡಲಾಗಿದ್ದು, ಜಿಲ್ಲೆಯಿಂದ ಬಲ್ಕೀಶ್ ಬಾನು ಅವರಿಗೆ ಅವಕಾಶ ನೀಡಲಾಗಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರ ಸಂಖ್ಯಾ ಬಲದ ಆಧಾರದ ಮೇಲೆ ಬಲ್ಕೀಶ್ ಬಾನು ಆಯ್ಕೆ ಯಾಗುವುದು ಬಹುತೇಕ ಖಚಿತವಾಗಿದೆ.
    ಬಲ್ಕೀಶ್ ಬಾನು ಪರಿಚಯ :
    ಜಿಲ್ಲೆಯ ರಾಜಕಾರಣದಲ್ಲಿ ಬಲ್ಕಿಶ್ ಬಾನು ಅವರ ಹೆಸರು ತುಂಬಾ ಚಿರಪರಿಚಿತ. ಖಾಸಗಿ ಶಾಲೆಯಲ್ಲಿ ಸಾಮಾನ್ಯ ಶಿಕ್ಷಕಿಯಾಗಿದ್ದ ಇವರು ರಾಜಕೀಯ ಕ್ಷೇತ್ರದಲ್ಲಿ ಜಿಲ್ಲೆಯ ಬಹಳಷ್ಟು ಘಟಾನುಘಟಿ ನಾಯಕರನ್ನು ಹಿಂದಿಕ್ಕಿ ಬೆಳೆದ ಪರಿ ಎಂತಹವರನ್ನು ಆಶ್ಚರ್ಯಗೊಳಿಸುತ್ತದೆ.
    ೧೯೮೭ರಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣೆಯಿಂದ ತಮ್ಮ ರಾಜಕೀಯ ಪರ್ವ ಆರಂಭಿಸಿದ ಬಲ್ಕೀಶ್ ಬಾನು ಮೊದಲ ಯತ್ನದಲ್ಲೇ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾದರು. ೧೯೮೯ ರಿಂದ ೧೯೯೨ ರವರೆಗೆ ರಾಜ್ಯ ಗ್ರಾಹಕದ ಹಿತರಕ್ಷಣಾ ಸಮಿತಿಯಸದಸ್ಯರಾದರು. ೧೯೯೫ ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪುನಃ ಆಯ್ಕೆಯಾದರು.
    ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ಜನತಾ ಪರಿವಾರದ ಸರ್ಕಾರ ರಚನೆಯಾಗಿತ್ತು. ಶಿವಮೊಗ್ಗ ಜಿಲ್ಲೆಯವರೇ ಆದ ಜೆ.ಎಚ್ ಪಟೇಲ್ ಮುಖ್ಯಮಂತ್ರಿಯಾದರು. ಇದು ಬಲೀಶ್ ಭಾನುರವರ ರಾಜಕೀಯ ಜೀವನದಲ್ಲಿ ಹೊಸ ತಿರುವು ಪಡೆಯಲು ಕಾರಣವಾಯಿತು. ೧೯೯೫ ರಿಂದ ೯೭ ರವರೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ದುಡಿದು ಮನೆಮಾತಾದರು.
    ಅದೇ ಸಂದರ್ಭದಲ್ಲಿ ಕ್ರೀಡಾ ಪ್ರಾಧಿಕಾರದ ಸದಸ್ಯರಾಗಿ ಅಮೇರಿಕಾದ ಆಟ್ಲಾಂಟಾದಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಒತ್ತಾಯಿಸಿ ೧೯೯೬ರಲ್ಲಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲು ಮಹಿಳಾ ನಿಯೋಗದ ನೇತೃತ್ವ ವಹಿಸಿದ್ದ ಇವರು ೧೯೯೭ ರಿಂದ ೨೦೦೦ ರವರೆಗೆ ರಾಜ್ಯ ವಕ್ಫ್ ಫೌಂಡೇಷನ್ ಮಹಿಳಾ ಅಭಿವೃದ್ಧಿ ಸದಸ್ಯೆಯಾಗಿ ಸೇವೆ ಸಲ್ಲಿಸಿದರು. ಈ ನಡುವೆ ಶಿವಮೊಗ್ಗ ದಿಂದ ಎಂ.ಎಲ್.ಸಿ ಚುನಾವಣೆಗೆ ಸ್ಪರ್ಧಿಸಿದ್ದರು.
    ಕೆಪಿಸಿಸಿ ಸದಸ್ಯೆಯಾಗಿ, ಕೆಪಿಸಿಸಿ ಮಹಿಳಾ ವಿಭಾಗದ ಸಹಕಾರ್ಯದರ್ಶಿಯಾಗಿ, ಕೆಪಿಸಿಸಿ ಮೈನಾರಿಟಿ ಸೆಲ್‌ನ ಕಾಯಂ ಆಹ್ವಾನಿತರಾಗಿ, ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ಇವರನ್ನು ಪಕ್ಷದ ಮುಖಂಡರು ಎಐಸಿಸಿ ಸದಸ್ಯೆಯಾಗಿ ನೇಮಕಗೊಳಿಸಿದರು.
    ೨೦೧೪ರಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಶ್ರಮವಹಿಸಿ ಕಾರ್ಯನಿರ್ವಹಿಸಿದರು. ಇದನ್ನು ಮನಗಂಡು ಪಕ್ಷದ ಅಂದಿನ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿರ್ದೇಶನದ ಮೇರೆಗೆ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರುಗಳು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದರು.  
    ಹಲವು ಬಾರಿ ವಿಧಾನಸಭೆ ಚುನಾವಣೆಗೆ ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರು. ಆದರೆ ಅವಕಾಶ ಲಭಿಸಿರಲಿಲ್ಲ. ಇದೀಗ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

ಶನಿವಾರ, ಜೂನ್ 1, 2024

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ

ಯುವ ಮೋರ್ಚಾ ವತಿಯಿಂದ ಪ್ರತಿಭಟನೆ : ಉನ್ನತಮಟ್ಟದ ತನಿಖೆಗೆ ಆಗ್ರಹ  


ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಖಂಡಿಸಿ ಶನಿವಾರ ಭದ್ರಾವತಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಖಂಡಿಸಿ ಶನಿವಾರ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.  
    ನಗರದ ಮಾಧವಚಾರ್ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದ ಯುವ ಮೋರ್ಚಾ ಮುಖಂಡರು ಮಾತನಾಡಿ,ನಿಗಮದಲ್ಲಿ ನಡೆದಿರುವ ಕೋಟ್ಯಾಂತರ ರು. ಹಣ ದುರುಪಯೋಗ ಪ್ರಕರಣ ರಾಜ್ಯದ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಹಣ ದುರುಪಯೋಗದ ಜಾಲಕ್ಕೆ ನಲುಗಿ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ ಸಂಗತಿಯಾಗಿದ್ದು, ಈ ಪ್ರಕರಣವನ್ನು ಯುವ ಮೋರ್ಚಾ ಖಂಡಿಸುವ ಜೊತೆಗೆ ಉನ್ನತ ಮಟ್ಟದ ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸುತ್ತದೆ ಎಂದರು.  
    ಯುವ ಮೋರ್ಚಾ ಅಧ್ಯಕ್ಷ ಧನುಷ್ ಬೋಸ್ಲೆ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷ ಧನ್ಯ ಪಟೇಲ್, ಪ್ರಮುಖರಾದ ಸುಧಾಕರ್, ಭರತ್, ತ್ಯಾಗರಾಜ್, ಮನು, ಶಶಾಂಕ್, ನವೀನ್, ರೈತ ಮೋರ್ಚಾ ಅಧ್ಯಕ್ಷ ಆನಂದ್, ಓಬಿಸಿ ಮೋರ್ಚಾ ಅಧ್ಯಕ್ಷ ರಾಜಶೇಖರ್ ಉಪ್ಪಾರ, ಸುಬ್ರಮಣಿ, ಶಾಂತಣ್ಣ,  ಎಸ್ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಜೇಶ್ ಸೇರಿದಂತೆ ಯುವ ಮೋರ್ಚಾದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಿ ಮುಖ್ಯಮಂತ್ರಿಗಳಿಂದ ಉದ್ಘಾಟಿಸಲು ಆಗ್ರಹ

ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿಯಿಂದ ಜೂ.೧೦ರಂದು ಪ್ರತಿಭಟನಾ ಧರಣಿ ಸತ್ಯಾಗ್ರಹ

ಭದ್ರಾವತಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷರಾದ ಡಿ.ಸಿ ಮಾಯಣ್ಣ ಮಾತನಾಡಿದರು.  
    ಭದ್ರಾವತಿ: ನಗರದ ಹೃದಯ ಭಾಗ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗ ನಿರ್ಮಾಣಗೊಳ್ಳುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನ ಕಾಮಗಾರಿ ತ್ವರಿತವಾಗಿ ಮುಕ್ತಾಯಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸುವಂತೆ ಒತ್ತಾಯಿಸಿ ಜೂ.೧೦ರಂದು ಬೆಳಿಗ್ಗೆ ೧೧ ಗಂಟೆಯಿಂದ ತಾಲೂಕು ಕಛೇರಿ ಮುಂಭಾಗ  ಡಾ. ಬಿ.ಆರ್ ಅಂಬೇಡ್ಕರ್ ಭವನ ಸಂರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು.
    ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೈಗಾರಿಕಾ ನಗರವಾಗಿ ಪ್ರಪಂಚದ ಭೂಪಟದಲ್ಲಿ ಗುರುತಿಸಿಕೊಂಡು ದೇಶದಲ್ಲಿಯೇ ಪ್ರಸಿದ್ದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಾಗು ದಲಿತ ಚಳುವಳಿ ಉದಯಿಸಿದ ನಗರದಲ್ಲಿ ಸುಸಜ್ಜಿತವಾದ ಡಾ. ಬಿ.ಆರ್ ಅಂಬೇಡ್ಕರ್ ಭವನದ ಅವಶ್ಯಕತೆ ಮನಗಂಡು ಕಳೆದ ಸುಮಾರು ೨೫ ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದ ಪರಿಣಾಮ ೨೦೧೮ರಲ್ಲಿ ಅಂಬೇಡ್ಕರ್ ಭವನ ಕಾಮಗಾರಿ ಆರಂಭಗೊಂಡಿದ್ದು, ಆದರೆ ನಿರ್ಲಕ್ಷ್ಯದಿಂದಾಗಿ ಕಾಮಗಾರಿಗೆ ಸೂಕ್ತ ಸಮಯದಲ್ಲಿ ಅಗತ್ಯವಿರುವ ಅನುದಾನ ಬಿಡುಗಡೆಯಾಗದೆ ಮಂದಗತಿಯಲ್ಲಿ ಸಾಗುತ್ತಿದೆ. ಈ ಹಿನ್ನಲೆಯಲ್ಲಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಹೋರಾಟ ನಡೆಸಿದ ಪರಿಣಾಮ ಇದೀಗ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೧.೫ ಕೋ. ರು. ಬಿಡುಗಡೆಗೊಳಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳಿಗೆ, ಸಂಬಂಧಪಟ್ಟ ಸಚಿವರು, ಸಂಸದರು, ಶಾಸಕರು, ಜಿಲ್ಲಾಡಳಿತ, ತಾಲೂಕು ಆಡಳಿತ, ನಗರಸಭೆ ಹಾಗು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
    ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈವರೆಗೂ ರಾಜ್ಯ ಸರ್ಕಾರದಿಂದ ೨ ಕೋ. ರು., ನಗರಸಭೆ ವತಿಯಿಂದ ೫೦ ಲಕ್ಷ ರು., ಸಂಸದರ ನಿಧಿಯಿಂದ ೨೫ ಲಕ್ಷ ರು. ಮತ್ತು ಇದೀಗ ಸಮಾಜ ಕಲ್ಯಾಣ ಇಲಾಖೆಯಿಂದ ೧.೫೦ ಕೋ. ರು ಅನುದಾನ ಬಿಡುಗಡೆಯಾಗಿದೆ. ತಕ್ಷಣ ಕಾಮಗಾರಿ ಪೂರ್ಣಗೊಳಿಸಿ ಭವನ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕೆಂದು ಆಗ್ರಹಿಸಿದರು.
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭವನ ಉದ್ಘಾಟಿಸಬೇಕು. ರಾಜ್ಯದ ಎಲ್ಲಾ ಸಚಿವರು, ಶಾಸಕರು ಒಳಗೊಂಡಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಅದ್ದೂರಿಯಾಗಿ ಸಮಾರಂಭ ಆಯೋಜಿಸಬೇಕು. ಈ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗು ಸಂವಿಧಾನ ಕುರಿತು ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿಚಾರ ಸಂಕೀರ್ಣ, ಸಭೆ, ಸಮಾರಂಭಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಭವನದ ನೆಲ ಮಾಳಿಗೆಯಲ್ಲಿ ಗ್ರಂಥಾಲಯ ಪ್ರಾರಂಭಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಲು ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
    ಗೌರವಾಧ್ಯಕ್ಷರಾದ ಡಿ.ಸಿ ಮಾಯಣ್ಣ ಮಾತನಾಡಿ, ಭವನ ಉದ್ಘಾಟನೆಗೊಳ್ಳುವ ಮೂಲಕ ಬಹಳ ವರ್ಷಗಳ ಬೇಡಿಕೆ ಈಡೇರಬೇಕು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲೂ ಸಮಿತಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷರಾದ ಡಿ.ಸಿ ಮಾಯಣ್ಣ, ಪ್ರೊ. ಎಂ. ಚಂದ್ರಶೇಖರಯ್ಯ, ಟಿ.ಜಿ ಬಸವರಾಜಯ್ಯ, ಎಸ್. ಆಂಜನೇಯ, ಐ.ಎಲ್ ಅರುಣ್ ಕುಮಾರ್,  ಕಾರ್ಯಾಧ್ಯಕ್ಷರಾದ ಸಿ. ಮಹಾಲಿಂಗಪ್ಪ, ಸೆಲ್ವರಾಜ್, ಬ್ರಹ್ಮಲಿಂಗಯ್ಯ, ಪ್ರಧಾನ ಕಾರ್ಯದರ್ಶಿಗಳಾದ ಅನಂತರಾಮು, ಪ್ರಮುಖರಾದ ಫೀರ್ ಷರೀಫ್, ರುದ್ರಯ್ಯ, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಿಡಿಗೇಡಿಗಳಿಂದ ಆಶಾಂತಿ ವಾತಾವರಣ : ಪೊಲೀಸರಿಗೆ ಮನವಿ

ಭದ್ರಾವತಿ ಹಳೇನಗರ ಭಾಗದಲ್ಲಿ ಕೆಲವು ಕಿಡಿಗೇಡಿಗಳಿಂದ ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದು, ಶಾಂತಿ ಕಾಪಾಡುವಂತೆ ಆಗ್ರಹಿಸಿ ಸಾರ್ವಜನಿಕರು ಹಳೇನಗರ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾರೆ.
    ಭದ್ರಾವತಿ: ಹಳೇನಗರ ಭಾಗದಲ್ಲಿ ಕೆಲವು ಕಿಡಿಗೇಡಿಗಳಿಂದ ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದು, ಶಾಂತಿ ಕಾಪಾಡುವಂತೆ ಆಗ್ರಹಿಸಿ ಸಾರ್ವಜನಿಕರು ಹಳೇನಗರ ಪೊಲೀಸ್ ಠಾಣೆಗೆ ಮನವಿ ಮಾಡಿದ್ದಾರೆ. 
     ಕಳೆದ ೫ ದಿನಗಳ ಹಿಂದೆ ಮಧ್ಯಾಹ್ನ ಸುಮಾರು ೨ ಗಂಟೆ ಸಮಯದಲ್ಲಿ ಹನುಮಂತನಗರ, ಕಂಚಿಬಾಗಿಲು ವೃತ್ತದ ಶ್ರೀ ಚೌಡಮ್ಮ ದೇವಸ್ಥಾನದ ಹತ್ತಿರ ಮನು ಎಂಬುರನ್ನು ಕಿಡಿಗೇಡಿಗಳು ಅಡ್ಡಗಟ್ಟಿ ಮಾರಣಾತಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ. ಈ ಹಿನ್ನಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು, ಆಶಾಂತಿ ವಾತಾವರಣ ನಿರ್ಮಾಣವಾಗಿದೆ. 
     ಈ ರೀತಿಯ ಘಟನೆಗಳು ಪುನಃ ಮರುಗಳಿಹಿಸದಂತೆ ತಕ್ಷಣ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಶಾಂತಿ ಕಾಪಾಡಬೇಕೆಂದು ಆಗ್ರಹಿಸಲಾಗಿದೆ. ಕೇಶವಮೂರ್ತಿ, ಮೈಲಾರಪ್ಪ, ಡಿ. ರಾಜು, ಲೋಕೇಶ್, ಮೇಘರಾಜ್ ಸೇರಿದಂತೆ ಇನ್ನಿತರ ಸ್ಥಳೀಯರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆ : ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ

  ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಸಸ...